ಮಾರ್ಚ್ 4, 2021
WhatsApp ನ ಡೆಸ್ಕ್‌ಟಾಪ್ ಆ್ಯಪ್‌ನಲ್ಲಿ ಈಗ ವ್ಯಕ್ತಿಯಿಂದ ವ್ಯಕ್ತಿಗೆ ಖಾಸಗಿಯಾದ ಮತ್ತು ಸುರಕ್ಷಿತವಾದ ವಾಯ್ಸ್ ಮತ್ತು ವೀಡಿಯೊ ಕಾಲ್‍ಗಳನ್ನು ಮಾಡಲು ಸಾಧ್ಯವಾಗಲಿದೆ ಎಂಬುದನ್ನು ಪ್ರಕಟಿಸಲು ನಮಗೆ ಸಂತೋಷವಾಗುತ್ತದೆ.
WhatsApp ನಲ್ಲಿ ಜನರು ಪರಸ್ಪರ ಕಾಲ್ ಮಾಡುವ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳವನ್ನು ನಾವು ಕಳೆದ ವರ್ಷವಿಡೀ ಗಮನಿಸಿದ್ದೇವೆ. ಹೆಚ್ಚಿನ ಸಂದರ್ಭಗಳಲ್ಲಿ ಅವು ದೀರ್ಘ ಸಂಭಾಷಣೆಗಳಾಗಿದ್ದವು. ಕಳೆದ ಹೊಸವರ್ಷದ ಮುನ್ನಾದಿನ,1.4 ಬಿಲಿಯನ್ ವಾಯ್ಸ್ ಮತ್ತು ವೀಡಿಯೊ ಕಾಲ್‌ಗಳನ್ನು ಮಾಡಲಾಗಿದ್ದು, ಇದು ಒಂದು ದಿನದಲ್ಲಿ ಮಾಡಲಾದ ಅತಿ ಹೆಚ್ಚಿನ ಕಾಲ್‌ಗಳ ದಾಖಲೆಯನ್ನು ಮುರಿದಿದೆ. ಭಾರಿ ಸಂಖ್ಯೆಯ ಜನ ಇನ್ನೂ ತಮ್ಮ ಪ್ರೀತಿಪಾತ್ರರಿಂದ ದೂರವಿರುವುದರಿಂದ, ಹೊಸ ಕೆಲಸದ ವಿಧಾನಗಳಿಗೆ ಹೊಂದಿಕೊಳ್ಳುತ್ತಿರುವುದರಿಂದ, ನೀವು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಅಥವಾ ಯಾವುದೇ ತಂತ್ರಜ್ಞಾನವನ್ನು ಬಳಸುತ್ತಿದ್ದರೂ, ನಿಮ್ಮ ಸಂಭಾಷಣೆಗಳು ಎಷ್ಟು ಸಾಧ್ಯವೋ ಆಷ್ಟರ ಮಟ್ಟಿಗೆ ಖುದ್ದಾಗಿ ಮಾಡಿದಂತಿರಬೇಕು ಎಂದು WhatsApp ಬಯಸುತ್ತದೆ.
ದೊಡ್ಡ ಪರದೆಯಲ್ಲಿ ಕಾಲ್ ಮಾಡುವುದರಿಂದ ಸಹೋದ್ಯೋಗಿಗಳ ಜೊತೆಗೆ ಕೆಲಸ ಮಾಡುವುದು ಸುಲಭವಾಗುತ್ತದೆ, ನಿಮ್ಮ ಕುಟುಂಬವನ್ನು ದೊಡ್ಡ ಕ್ಯಾನ್ವಾಸಿನ ಮೇಲೆ ನೋಡಬಹುದು ಹಾಗೂ ಕೈ ಮುಕ್ತವಾಗಿರುತ್ತದೆ ಮತ್ತು ಮಾತನಾಡುತ್ತಲೇ ಕೋಣೆಯಲ್ಲಿ ಆಚೀಚೆ ಓಡಾಡಬಹುದು. ಡೆಸ್ಕ್‌ಟಾಪ್ ಕಾಲ್ ಅನ್ನು ಇನ್ನಷ್ಟು ಉಪಯುಕ್ತಗೊಳಿಸಲು, ಪೋರ್ಟ್‌ರೈಟ್ ಮತ್ತು ಲ್ಯಾಂಡ್‌ಸ್ಕೇಪ್ ಒರಿಯಂಟೇಷನ್‌ಗಳೆರಡರಲ್ಲೂ ಸರಾಗವಾಗಿ ಕೆಲಸ ಮಾಡುವಂತೆ ಆಯೋಜಿಸಿದ್ದೇವೆ. ಅದು ನಿಮ್ಮ ಕಂಪ್ಯೂಟರ್ ಪರದೆಯ ಮೇಲೆ ಗಾತ್ರ ಬದಲಾವಣೆ ಮಾಡಬಲ್ಲ ಪ್ರತ್ಯೇಕ ವಿಂಡೋ ಆಗಿ ಕಾಣಿಸಿಕೊಳ್ಳಲಿದೆ ಮತ್ತು ಅದು ಯಾವತ್ತೂ ಮೇಲ್ತುದಿಯಲ್ಲಿರುವಂತೆ ಸೆಟ್ ಮಾಡಲಾಗಿದೆ. ಇದರಿಂದ, ನೀವು ಯಾವತ್ತೂ ನಿಮ್ಮ ಬ್ರೌಸರ್ ಟ್ಯಾಬ್‌ನಲ್ಲಿ ಅಥವಾ ತೆರೆದಿಟ್ಟ ಹಲವು ವಿಂಡೋಗಳ ನಡುವೆ ವೀಡಿಯೊ ಚಾಟ್‌ಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿಲ್ಲ.
WhatsApp ನಲ್ಲಿ ವಾಯ್ಸ್ ಮತ್ತು ವೀಡಿಯೊ ಕಾಲ್‌ಗಳು ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಟ್ ಆಗಿವೆ. ಹೀಗಾಗಿ, ನೀವು ಫೋನ್‌ನಿಂದ ಕಾಲ್ ಮಾಡಿದ್ದರೂ ಅಥವಾ ಕಂಪ್ಯೂಟರಿನಿಂದ ಕಾಲ್ ಮಾಡಿದ್ದರೂ WhatsApp ಅವುಗಳನ್ನು ನೋಡುವುದಾಗಲೀ ಕೇಳುವುದಾಗಲೀ ಸಾಧ್ಯವಿಲ್ಲ. WhatsApp ಡೆಸ್ಕ್‌ಟಾಪ್ ಆ್ಯಪ್ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಕಾಲ್‌ಗಳ ಸೌಲಭ್ಯವನ್ನು ಆರಂಭಿಸುವ ಮೂಲಕ ನಾವು ನಿಮಗೆ ವಿಶ್ವಾಸಾರ್ಹವಾದ ಮತ್ತು ಒಳ್ಳೆಯ ಗುಣಮಟ್ಟದ ಅನುಭವ ನೀಡುವುದನ್ನು ಖಚಿತಪಡಿಸುತ್ತಿದ್ದೇವೆ. ಗ್ರೂಪ್ ವಾಯ್ಸ್ ಮತ್ತು ವೀಡಿಯೊ ಕಾಲ್‌ಗಳನ್ನು ಸೇರ್ಪಡೆ ಮಾಡುವ ಮೂಲಕ ಭವಿಷ್ಯದಲ್ಲಿ ಈ ಸೌಲಭ್ಯವನ್ನು ನಾವು ಇನ್ನಷ್ಟು ವಿಸ್ತರಿಸಲಿದ್ದೇವೆ.
ಜನರು ತಮ್ಮ ಸ್ನೇಹಿತ/ತೆಯರು ಮತ್ತು ಕುಟುಂಬಗಳ ಜೊತೆ ಖಾಸಗಿ ಮತ್ತು ಸುರಕ್ಷಿತವಾದ ಡೆಸ್ಕ್‌ಟಾಪ್ ಕಾಲ್‌ಗಳನ್ನು ಆನಂದಿಸಲಿದ್ದಾರೆ ಎಂದು ನಾವು ಭಾವಿಸುತ್ತೇವೆ. Windows PC ಮತ್ತು Mac ಗೆ ಡೆಸ್ಕ್‌ಟಾಪ್ ಆ್ಯಪ್ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದೂ ಸೇರಿದಂತೆ ಹೆಚ್ಚಿನ ಮಾಹಿತಿಗಳನ್ನು ನೀವು ಇಲ್ಲಿ ಓದಬಹುದು.
ಮಾರ್ಚ್ 4, 2021